ಬೆಳಗಾಂವಿ
ಕರ್ನಾಟಕ ರಾಜ್ಯದ ಒಂದು ವಿಭಾಗ: ಜಿಲ್ಲೆ: ತಾಲ್ಲೂಕು ಮತ್ತು ಅವುಗಳ ಆಡಳಿತ ಕೇಂದ್ರ ನಗರ. ಬೆಳಗಾಂವಿ ವಿಭಾಗಕ್ಕೆ, ಬಿಜಾಪುರ, ಧಾರವಾಡ, ಉತ್ತರಕನ್ನಡ ಮತ್ತು ಬೆಳಗಾಂವಿ ಜಿಲ್ಲೆಗಳು ಸೇರಿವೆ. ಈ ಜಿಲ್ಲೆ ಕರ್ನಾಟಕ ರಾಜ್ಯದ ವಾಯವ್ಯ ಭಾಗದಲ್ಲಿ ಉ. ಅ. 150 23 - 160 28 ಮತ್ತು ಪೂ.ರೇ. 740 5 - 750 28 ನಡುವೆ ಹಬ್ಬಿದೆ. ಜಿಲ್ಲೆಯ ಉತ್ತರದಲ್ಲಿ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳು ಪಶ್ಚಿಮದಲ್ಲಿ ರತ್ನಾಗಿರಿ ಮತ್ತು ಕೊಲ್ಹಾಪುರ ಜಿಲ್ಲೆಗಳು ಹಾಗೂ ಗೋವೆ, ಪೂರ್ವದಲ್ಲಿ ಬಿಜಾಪುರ ಬಾಗಲಕೋಟೆ, ನರಗುಂದ ಜಿಲ್ಲೆಗಳೂ ದಕ್ಷಿಣದಲ್ಲಿ ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಇವೆ. ಅಥಣಿ, ರಾಯಬಾಗ, ಬೆಳಗಾಂವಿ, ಸವದತ್ತಿ, ಬೈಲಹೊಂಗಲ, ಖಾನಾಪುರ, ರಾಮದುರ್ಗ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ ಇವು ಈ ಜಿಲ್ಲೆಯ ತಾಲ್ಲೂಕುಗಳು. ಈ ಜಿಲ್ಲೆಯಲ್ಲಿ 33 ಹೋಬಳಿಗಳೂ 1,180 ಗ್ರಾಮಗಳೂ 17 ಪಟ್ಟಣಗಳೂ ಇವೆ. ಜಿಲ್ಲೆಯ ಒಟ್ಟು ವಿಸ್ತೀರ್ಣ 13,415 ಚಕಿಮೀ ಜನಸಂಖ್ಯೆ 42,07,264 (2001). 

	ಜಲ್ಲೆಯ ಪಶ್ಚಿಮ ಅಂಚು ಪಶ್ಚಿಮ ಘಟ್ಟಗಳ ಪೂರ್ವ ಪಾಶ್ರ್ವದಲ್ಲಿದೆ. ಜಿಲ್ಲೆಯ ಪೂರ್ವದ ಬಹು ಭಾಗ ಚಪ್ಪಟೆಯಾದ ಮೈದಾನ. ಅಲ್ಲಲ್ಲಿ ಕಡಿದಾದ ದಿಣ್ಣೆಗಳ ಸಾಲುಗಳಿವೆ. ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು ಕೃಷ್ಣಾ, ಘಟಪ್ರಭಾ, ಮಲಪ್ರಭಾ ಮತ್ತು ಡೋಣಿ. ಘಟಪ್ರಭಾ ನದಿಯ ಗೋಕಾಕ ಜಲಪಾತ ಹೆಸರಾದದ್ದು. ಬೆಳಗಾಂವಿ ಜಿಲ್ಲೆಯ ದಕ್ಷಿಣ ಭಾಗ ನೈಸ್ ಶಿಲೆಗಳಿಂದ ಕೂಡಿದೆ. ಅಲ್ಲಿ ಧಾರವಾಡ ವಿಭಾಗದ ಹೆಮಟೈಟ್ ಸಿಸ್ಟ್ ಶಿಲೆಗಳೂ ಇವೆ. ಜಿಲ್ಲೆಯ ಮಧ್ಯಭಾಗದಲ್ಲಿ ಬೆಣಚುಕಲ್ಲು ಹಾಗೂ ಕಲಾದಗಿ ಗುಂಪಿನ ಸುಣ್ಣದ ಶಿಲಾಸ್ತರ ಇವೆ. ಪಶ್ಚಿಮ ಹಾಗೂ ಉತ್ತರ ಭಾಗದಲ್ಲಿ ದಕ್ಷಿಣ ಪ್ರಸ್ತರಕ್ಕೆ ಸಂಬಂಧಿಸಿದ ಬೆಸಾಲ್ಟ್ ಹಾಗೂ ಲ್ಯಾಟರೈಟ್ ಶಿಲಾಸ್ತರಗಳುಂಟು. ನದಿ ಕೊಳ್ಳಗಳಲ್ಲಿ ಪ್ಲೀಸ್ಟೊಸೀನ್ ಯುಗದ ರೇವೆಮಣ್ಣು, ಉಸುಗು ಹಾಗೂ ಹರಳುಗಳು ಹರಡಿವೆ. ಗೋಕಾಕದಿಂದ ಈಶಾನ್ಯಕ್ಕೆ 5 ಕಿಮೀ ದೂರದಲ್ಲಿ ಘಟಪ್ರಭಾ ನದಿಯ ದಡದಲ್ಲಿ ಬಿಕಡೌಳಿ ಎಂಬ ಗ್ರಾಮದಲ್ಲಿ ಶಿಲಾ ಪಳೆಯುಳಿಕೆಗಳಿವೆ. ಕಪ್ಪು, ಕೆಂಪು ಹಾಗೂ ಉಸುಕು ಮಿಶ್ರಿತ ಕಪ್ಪು ಮಣ್ಣುಗಳು ಜಿಲ್ಲೆಯಲ್ಲಿ ವ್ಯಾಪಕವಾಗಿವೆ.  

	ಬೆಳಗಾಂವಿ ಹಾಗೂ ಖಾನಾಪುರ ತಾಲ್ಲೂಕುಗಳಲ್ಲಿ ಹೆಚ್ಚು ಮಳೆಯಾಗುತ್ತದೆ. ಈ ಭಾಗದ ವಾರ್ಷಿಕ ಸರಾಸರಿ ಮಳೆ 1270 ಮಿಮೀ. ಜಿಲ್ಲೆಯ ಉಳಿದ ಭಾಗದಲ್ಲಿ ಸರಾಸರಿ 635-762 ಮಿಮೀ ಮಳೆ ಬೀಳುವುದು. ಜಿಲ್ಲೆಯಲ್ಲಿ ಸಾಮಾನ್ಯವಾಗಿ ತಂಪಾದ ವಾಯುಗುಣ ಇರುತ್ತದೆ. ಜಿಲ್ಲೆಯ ಉಷ್ಣತೆ 140 ಸೆ.- 350 ಸೆ. ಖಾನಾಪುರ ಹಾಗೂ ಬೆಳಗಾಂವಿ ತಾಲ್ಲೂಕುಗಳಲ್ಲಿ ನಿತ್ಯ ಹರಿದ್ವರ್ಣ ಕಾಡುಗಳಿವೆ. 

	ಜಿಲ್ಲೆಯಲ್ಲಿ ಬೆಳೆಯುವ ಮರಗಳು ತೇಗ, ಬೀಟೆ, ಹಳದಿ ನೇರಳೆ ಮತ್ತು ಗೊಬ್ಬಳಿ. ಜಿಲ್ಲೆಯ ನೈಋತ್ಯ ಭಾಗದ ಕಾಡುಗಳಲ್ಲಿ ಬಿದಿರು, ಶ್ರೀಗಂಧ ಮತ್ತು ಇತರ ಎತ್ತರದ ಮರಗಳಿವೆ. ಪೂರ್ವಕ್ಕೆ ಹೋದಂತೆ ಅರಣ್ಯ ವಿರಳವಾಗುತ್ತದೆ. ಜಿಲ್ಲೆಯಲ್ಲಿ ಮೆದು ತಿರುಳಿನ ಮತ್ತು ಇತರ ಮರಗಳನ್ನು ಬೆಳೆಸಲಾಗುತ್ತಿದೆ. ಗೋಡಂಬಿ ಗಿಡಗಳನ್ನೂ ನೆಡಲಾಗಿದೆ. 

	ಬೆಳಗಾಂವಿ ಜಿಲ್ಲೆಯಲ್ಲಿ ಆದಿ ಶಿಲಾಯುಗದಿಂದ ಕಬ್ಬಿಣ ಯುಗದ ತನಕದ ಅನೇಕ ಪ್ರಾಗೈತಿಹಾಸಿಕ ನೆಲೆಗಳಿವೆ. ಕ್ರಿ. ಪೂ. 1ನೆಯ ಶತಮಾನದಲ್ಲಿ ಕಾಶ್ಯಪ ಗೋತ್ರದವನೊಬ್ಬ ಯದು ಗ್ರಾಮದಲ್ಲಿ ಅನೇಕ ಯಜ್ಞಗಳನ್ನು ಮಾಡಿದನೆಂದು ಹೇಳಲಾಗಿದೆ. ಖಾನಾಪುರ ತಾಲ್ಲೂಕಿನ ಹಲಶಿ ಗ್ರಾಮದಲ್ಲಿ ದೊರೆತಿರುವ ಏಳು ತಾಮ್ರ ಪಟಗಳ ಮೇರೆಗೆ ಆ ಗ್ರಾಮ ಆದ್ಯ ಕದಂಬರ ಉಪರಾಜಧಾನಿಯಾಗಿತ್ತು. ಅಥಣಿಯ ಪ್ರದೇಶ ಕುಂತಲನಾಡಿಗೆ ಸೇರಿತ್ತು. ಅದು ಕೊಂಡಿ ಅಥವಾ ಕುಹುಂಡಿ 3000 ಎಂದು ಪ್ರಸಿದ್ಧವಾಗಿತ್ತು. ಕದಂಬರು, ಚಾಳುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಳುಕ್ಯರು ಈ ಭಾಗದ ಮೇಲೆ ಪ್ರಭುತ್ವ ಹೊಂದಿದ್ದರು. ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ರಟ್ಟರ ಸಾಮಂತ ಮನೆತನವೊಂದಕ್ಕೆ ಸವದತ್ತಿ ಕೇಂದ್ರವಾಗಿತ್ತು. ಹಲಶಿ 12000, ಕೊಂಕಣ 900 ಪ್ರದೇಶಗಳನ್ನು ಜಯಕೇಶಿ ಆಳುತ್ತಿದ್ದ. ಇವನ ರಾಜಧಾನಿ ಚಂದ್ರಪುರ ಎಂಬುದು ಚಿಕ್ಕೋಡಿ ತಾಲ್ಲೂಕಿನ ಈಗಿನ ಚಂದೂರು ಇರಬಹುದೆನ್ನಲಾಗಿದೆ. 13ನೆಯ ಶತಮಾನದಲ್ಲಿ ರಟ್ಟ 1ನೆಯ ಲಕ್ಷ್ಮೀದೇವ ಗೋವೆಯ ಕದಂಬರಿಂದ ವೇಣು ಗ್ರಾಮವನ್ನು (ಬೆಳಗಾಂವಿ) ವಶಪಡಿಸಿಕೊಂಡು ಸುಗಂಧ ವರ್ತಿಯಿಂದ (ಸವದತ್ತಿ) ಅಲ್ಲಿಗೆ ತನ್ನ ರಾಜಧಾನಿಯನ್ನು ಬದಲಾಯಿಸಿದ. 

	ದೇವಗಿರಿಯ ಯಾದವರ ಅನಂತರ 1327ರಲ್ಲಿ ಮಹಮ್ಮದ್ ತೊಗಲಕನಿಗೆ ಈ ಪ್ರದೇಶ ಸೇರಿತು. ಹುಕ್ಕೇರಿ ಮತ್ತು ರಾಯಬಾಗದಲ್ಲಿ ಅವನು ಅಮೀರರನ್ನು ನೇಮಿಸಿದ. ಮುಂದೆ ಇದು ಬಹಮನಿ ಅರಸರ ವಶವಾಯಿತು. ವಿಜಯನಗರ ಸಾಮ್ರಾಜ್ಯದ ಅನಂತರ ಸಿರಸಂಗಿಯ ದೇಸಾಯರ ಹಿಂದಿನವನಾದ ವಿಠಲಗೌಡ ಎಲ್ಲಿ ರಾಜ್ಯ ಕಟ್ಟಲು ಯತ್ನಿಸಿದ. ಆದರೆ ಬಿಜಾಪುರದ ಆದಿಲ್ ಶಾಹನಿಂದ ಇದಕ್ಕೆ ಅಡ್ಡಿ ಒದಗಿತು. 

 	17ನೆಯ ಶತಮಾನದ ಕೊನೆಯ ವೇಳೆಗೆ ಇಲ್ಲಿ ಮರಾಠರು ಪ್ರಬಲರಾದರು. ಅನಂತರ ಹುಕ್ಕೇರಿ, ವಂಟಮುರಿ, ಕಿತ್ತೂರು ಮೊದಲಾದ ಕಡೆಗಳಲ್ಲಿ ದೇಸಾಯರ ಆಡಳಿತ ನೆಲಸಿತು. 1818ರಲ್ಲಿ ಬ್ರಿಟಿಷರು ಬೆಳಗಾಂವಿ ಕೋಟೆಯನ್ನು ವಶಪಡಿಸಿಕೊಂಡರು. 1824ರಲ್ಲಿ ಕಿತ್ತೂರು ಬ್ರಿಟಿಷರ ವಶವಾಯಿತು. ಬ್ರಿಟಿಷರು 1836ರಲ್ಲಿ ಬೆಳಗಾಂವಿ ಜಿಲ್ಲೆ ರಚಿಸಿದರು. ಇದು ಮುಂಬಯಿ ಪ್ರಾಂತ್ಯಕ್ಕೆ ಸೇರಿತ್ತು. 1956ರಲ್ಲಿ ರಾಜ್ಯಗಳ ಮರುವಿಂಗಡಣೆಯಾದಾಗ ಇದನ್ನು ಈಗಿನ ಕರ್ನಾಟಕ ರಾಜ್ಯಕ್ಕೆ ಸೇರಿಸಲಾಯಿತು. 

	ಜಿಲ್ಲೆಯ ಒಟ್ಟು 13,46,000 ಹೆಕ್ಟೇರ್ ನೆಲದಲ್ಲಿ 1970-71ರ ಅಂಕಿಅಂಶಗಳ ಪ್ರಕಾರ 1,92,000 ಹೆಕ್ಟೇರ್ ಅರಣ್ಯ ಪ್ರದೇಶ. 95,000 ಹೆಕ್ಟೇರ್ ನೆಲ ಸಾಗುವಳಿಗೆ ಯೋಗ್ಯವಾಗಿಲ್ಲ. ಕೃಷಿಯೋಗ್ಯವಾದ ನೆಲ 56,000 ಹೆಕ್ಟೇರು, ಬೀಳು ಜಮೀನು 92,000 ಹೆಕ್ಟೇರು, ಕೃಷಿಗೆ ಒಳಪಟ್ಟಿರುವ ನೆಲ 9,11,000 ಹೆಕ್ಟೇರ್‍ಗಳು.  

	ಜಿಲ್ಲೆಯ ಮುಖ್ಯ ಬೆಳೆಗಳು ಸಜ್ಜೆ, ಗೋಧಿ, ಬತ್ತ, ಜೋಳ, ಕಬ್ಬು, ಶೇಂಗಾ, ಬೇಳೆಕಾಳು, ಹತ್ತಿ, ದ್ರಾಕ್ಷಿ, ಮೆಣಸಿನಕಾಯಿ ಮತ್ತು ಹೊಗೆಸೊಪ್ಪು ನಿಪ್ಪಾಣಿಯ ಹೊಗೆಸೊಪ್ಪು ಪ್ರಸಿದ್ಧವಾಗಿದೆ. ಹಣ್ಣು, ತರಕಾರಿ, ಹಿಪ್ಪನೇರಳೆಗಳೂ ಬೆಳೆಯುತ್ತವೆ. ಬೆಳಗಾಂವಿ ಜಿಲ್ಲೆಯಲ್ಲಿ ಕರೆಯುವ ಹಸುಗಳ ಸಂಖ್ಯೆ ಹೆಚ್ಚಾಗಿದೆ. ದನ, ಎಮ್ಮೆ, ಕತ್ತೆ, ಕುರಿ, ಆಡು ಇವು ಜಿಲ್ಲೆಯ ಪ್ರಮುಖ ಸಾಕು ಪ್ರಾಣಿಗಳು.

	ಜಿಲ್ಲೆ ಕೈಗಾರಿಕೆಯಲ್ಲೂ ಮುಂದುವರಿಯುತ್ತಿದೆ. ಅಲ್ಯೂಮಿನಿಯಮ್ ಕಾರ್ಖಾನೆ, ಜವಳಿ ಗಿರಣಿಗಳು ಮತ್ತು ಸಕ್ಕರೆ ಕಾರ್ಖಾನೆಗಳಿವೆ. ಯಂತ್ರೋಪಕರಣ, ಉಕ್ಕಿನ ವಸ್ತುಗಳು, ಸಿಮೆಂಟ್, ರಾಸಾಯನಿಕ, ಬಣ್ಣ, ಮರದ ಸಾಮಾನು, ಮೋಟಾರಿನ ಬಿಡಿ ಭಾಗಗಳು, ಸಾಬೂನು, ವೈಜ್ಞಾನಿಕ ಉಪಕರಣ, ಪಾತ್ರೆ, ಅಗರಬತ್ತಿ, ಮಗ್ಗದ ಬಟ್ಟೆ ಇವು ಸಣ್ಣ ಗಾತ್ರದ ಕೈಗಾರಿಕೆಗಳು.

	ಬೆಂಗಳೂರು-ಮಿರಜ್ ಮೀಟರ್‍ಗೇಜ್, ರೈಲುಮಾರ್ಗ ಜಿಲ್ಲೆಯನ್ನು ಹಾದು ಹೋಗುತ್ತದೆ. ಲೋಂಡದಿಂದ ಗೋವೆಗೆ ಕ್ಯಾಸಲ್‍ರಾಕ್ ಮೂಲಕ ರೈಲ್ವೆ ಸಂಪರ್ಕವಿದೆ. ಲೋಂಡ, ಖಾನಾಪುರ, ಬೆಳಗಾಂವಿ, ಧೂಪದಾಳ, ಗೋಕಾಕ, ರಾಯಬಾಗ, ಕುಡಚಿ, ಶೇಡಬಾಳ ಇವು ಮುಖ್ಯ ರೈಲ್ವೆ ನಿಲ್ದಾಣಗಳು. ಜಿಲ್ಲೆಯಲ್ಲಿರುವ ರೈಲು ಮಾರ್ಗಗಳ ಉದ್ದ 217 ಕಿಮೀ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಿಲ್ಲೆಯ ಮೂಲಕ ಸಾಗುತ್ತದೆ. ಬೆಳಗಾಂವಿಯಿಂದ ನೆರೆಯ ಗೋವ ಮಹಾರಾಷ್ಟ್ರಗಳಿಗೂ ಕರ್ನಾಟಕದ ಪ್ರಮುಖ ಸ್ಥಳಗಳಿಗೂ ರಸ್ತೆ ಸಂಪರ್ಕವಿದೆ. ಜಿಲ್ಲೆಯಲ್ಲಿರುವ ಉತ್ತಮ ರಸ್ತೆಗಳ ಉದ್ದ 4,331 ಕಿಮೀ. ಬೆಳಗಾಂವಿ ನಗರದಿಂದ ಮಂಗಳೂರು, ಮುಂಬಯಿ ಮುಂತಾದ ಸ್ಥಳಗಳಿಗೆ ವಿಮಾನ ಸಂಪರ್ಕವಿದೆ. 

	ಅಥಣಿ, ಬೈಲಹೊಂಗಲ, ಬೆಳಗಾಂವಿ, ಬೆಳಗಾಂವಿ ದಂಡು, ಚಿಕ್ಕೋಡಿ, ಗೋಕಾಕ ಹುಕ್ಕೇರಿ, ಖಾನಾಪುರ, ಕೊಣ್ಣೂರು, ಕುಡಚಿ, ಲೋಂಡ, ಮೂಡಲಗಿ, ನಿಪ್ಪಾಣಿ, ರಾಯಬಾಗ, ರಾಮದುರ್ಗ, ಸದಲ್ಗಾ, ಸೌಂದತ್ತಿ ಇವು ಜಿಲ್ಲೆಯ ಪಟ್ಟಣಗಳು. 

	ಕಿತ್ತೂರ ರಾಣಿ ಚೆನ್ನಮ್ಮನ ಸಂಸ್ಥಾನವಾಗಿದ್ದ ಕಿತ್ತೂರು ಪ್ರಸಿದ್ಧಿ ಪಡೆದ ಪುಣ್ಯಕ್ಷೇತ್ರ. ರಾಮತೀರ್ಥ, ಸವದತ್ತಿ, ಘಟಪ್ರಭಾ ನದಿಯ ಗೋಕಾಕ ಜಲಪಾತ ಹಾಗೂ ಹಿಡಕಲ್ ಕಟ್ಟೆ, ಸವದತ್ತಿಯ ಬಳಿ ಇರುವ ಮಲಪ್ರಭಾ ಕಟ್ಟೆ ಇವು ಪ್ರಮುಖ ಆಕರ್ಷಣೆಗಳು, ಕುಡಚಿ, ಕೊಟಕನೂರು, ಮಂಗಸೂಳಿ ಚಿಂಚಲಿ, ಸವದÀತ್ತಿ, ಬಾಳೆಕುಂದ್ರಿ, ಅಮ್ಮಣಗಿ, ಅಂಕಲಗಿ, ತವರ, ಅರಭಾವಿ, ಕಲ್ಲೋಣಿ, ಸಾವಳಗಿ ಮುಂತಾದ ಸ್ಥಳಗಳಲ್ಲಿ ಪ್ರತಿವರ್ಷವೂ ಜಾತ್ರೆಗಳು ಪರಿಷೆಗಳೂ ಸೇರುತ್ತವೆ.                    (ಎಸ್.ಎನ್.ಎ.ಆರ್.ಇ.)

	ತಾಲ್ಲೂಕು: ಜಿಲ್ಲೆಯ ಪಶ್ಚಿಮ ಭಾಗದಲ್ಲಿರುವ ಈ ತಾಲ್ಲೂಕನ್ನು ಉತ್ತರದಲ್ಲಿ ಹುಕ್ಕೇರಿ, ಪೂರ್ವದಲ್ಲಿ ಬೈಲಹೊಂಗಲ, ಈಶಾನ್ಯದಲ್ಲಿ ಗೋಕಾಕ ಮತ್ತು ದಕ್ಷಿಣದಲ್ಲಿ ಖಾನಾಪುರ ತಾಲ್ಲೂಕುಗಳೂ ಪಶ್ಚಿಮದಲ್ಲಿ ಮಹಾರಾಷ್ಟ್ರ ರಾಜ್ಯವೂ ಸುತ್ತುವರಿದಿವೆ. ಬಾಗೇವಾಡಿ, ಬೆಳಗಾಂವಿ, ಉಚಗಾಂವ ಮತ್ತು ಕಾಕತಿ ಈ ತಾಲ್ಲೂಕಿನ ಹೋಬಳಿಗಳು. 136 ಗ್ರಾಮಗಳಿವೆ. ವಿಸ್ತೀರ್ಣ ಚ.ಕಿಮೀ. ಜನಸಂಖ್ಯೆ 8.15,113 (2001).

	ಪಶ್ಚಿಮ ಘಟ್ಟಗಳ ಅಂಚಿನಲ್ಲಿರುವ ಈ ತಾಲ್ಲೂಕು ಮಲೆನಾಡ ಪ್ರದೇಶ. ತಂಪಾದ ಹವಾಮಾನವಿದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ, 1,549, ಮಿಮೀ (1971). ಖಾನಾಪುರ ತಾಲ್ಲೂಕನ್ನು ಬಿಟ್ಟರೆ ಇಡೀ ಜಿಲ್ಲೆಯಲ್ಲಿ ಇದು ಅಧಿಕ ಮಳೆ ಬೀಳುವ ಪ್ರದೇಶ. ತಾಲ್ಲೂಕಿನ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಅರಣ್ಯವಿದೆ. ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಉಪಯುಕ್ತ ಮರಗಳು ಬೆಳೆಯುತ್ತವೆ. ಈ ತಾಲ್ಲೂಕಿನ ವಾಯುವ್ಯ ಭಾಗದಲ್ಲಿ ತಾಲ್ಲೂಕು ಗಡಿಯಾಗಿ ಸ್ವಲ್ಪದೂರ ಘಟಪ್ರಭಾ ನದಿ ಹರಿಯುವುದು. ತಾಲ್ಲೂಕು ಘಟಪ್ರಭಾ ಮತ್ತು ಮಲಪ್ರಭಾ ನದಿಗಳೆರಡರ ಮಧ್ಯ ಪ್ರದೇಶವಾಗಿದೆ. ಈ ತಾಲ್ಲೂಕಿನಲ್ಲಿ ಕೆಲವು ತೊರೆಗಳು ಮಳೆಗಾಲದಲ್ಲಿ ತುಂಬಿ ಹರಿದು ಬೇಸಿಗೆಯಲ್ಲಿ ಬತ್ತಿಹೋಗುತ್ತವೆ. ಹೆಸರಿಸಬಹುದಾದ ನದಿಯೆಂದರೆ ಮಾರ್ಕಂಡೇಯ ಒಂದೇ. ಇದು ನೈಋತ್ಯದಿಂದ ಈಶಾನ್ಯಾಭಿಮುಖವಾಗಿ ಹರಿಯುವುದು. ಬಿಲಾರಿ ಮತ್ತು ಇತರ ತೊರೆಗಳು ಈ ನದಿಯನ್ನು ದಕ್ಷಿಣದಿಂದ ಕೂಡಿಕೊಳ್ಳುವುವು. ತಾಲ್ಲೂಕಿನ ಬಹುಭಾಗದಲ್ಲಿ ವ್ಯವಸಾಯಕ್ಕೆ ಅನುಕೂಲವಾದ ಕಸುವಿನ ಎರೆಭೂಮಿ ಇದೆ. ನದಿ ತೊರೆಗಳ ಬಯಲು ಪ್ರದೇಶವೆಲ್ಲ ಫಲವತ್ತಾಗಿದ್ದು ಬತ್ತ, ಕಬ್ಬು ಬೆಳೆಗೆ ಪ್ರಶಸ್ತವಾಗಿದೆ. ಇವುಗಳ ಜೊತೆಗೆ ಜೋಳ, ಗೋಧಿ, ದ್ವಿದಳ ಧಾನ್ಯಗಳು ಸೇಂಗಾ, ಮತ್ತು ವಿವಿಧ ತರಕಾರಿಗಳನ್ನು ಬೆಳೆಯುತ್ತಾರೆ. 

	ಈ ತಾಲ್ಲೂಕಿನಲ್ಲಿ ಶಾಲಾಕಾಲೇಜುಗಳೂ ಅಂಚೆ, ತಂತಿ, ದೂರವಾಣಿ ಮತ್ತು ವಿದ್ಯುಚ್ಛಕ್ತಿ ಹಾಗೂ ಪಶುವೈದ್ಯಾಲಯ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮುಂತಾದ ಆಧುನಿಕ ಸೌಕರ್ಯಗಳೂ ಇವೆ. ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ಹೆದ್ದಾರಿ ಈ ತಾಲ್ಲೂಕು ಮುಖಾಂತರ ಹಾದುಹೋಗಿದ್ದು, ಸುತ್ತಲ ರಾಜ್ಯ, ಪಟ್ಟಣ, ಗ್ರಾಮಗಳಿಗೆ ಉತ್ತಮ ಮಾರ್ಗ ಸಂಪರ್ಕ ಪಡೆದಿದೆ. ಬೆಂಗಳೂರು-ಮಿರಜ್ ರೈಲ್ವೆ ಮಾರ್ಗ ಈ ತಾಲ್ಲೂಕಿನ ದಕ್ಷಿಣದಿಂದ ಉತ್ತರಕ್ಕೆ ಹಾದುಹೋಗಿದೆ. ಇವೆಲ್ಲ ಸಂಪರ್ಕ ಮತ್ತು ಸೌಲಭ್ಯಗಳಿಂದ ಸರಕು ಸಾಗಣಿಗೆ ಮತ್ತು ವ್ಯಾಪಾರಾಭಿವೃದ್ಧಿಗೆ ಬಹಳಷ್ಟು ಅನುಕೂಲವಾಗಿದೆ. ಇದಕ್ಕೆ ಪೂರಕವಾಗಿ ನಿಯಂತ್ರಿತ ಮಾರುಕಟ್ಟೆಗಳೂ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳೂ ಇವೆ. 

	ಈ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳೆಂದರೆ ಬೆಳಗಾಂವಿಗೆ ಸುಮಾರು 5 ಕಿಮೀ ದೂರದಲ್ಲಿರುವ ಕಣಬರಗಿ ಗ್ರಾಮದ ಹತ್ತಿರವಿರುವ ರಾಮತೀರ್ಥ. ಇಲ್ಲಿ ಬೆಟ್ಟದ ಬುಡದಲ್ಲಿರುವ ತೀರ್ಥಜಲದಲ್ಲಿ ಜನ ಮಿಂದು ಅಲ್ಲಿರುವ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವರು. ಬೆಳಗಾಂವಿಯ ಪೂರ್ವಕ್ಕೆ ಸಾಂಬ್ರದ ಹತ್ತಿರವಿರುವ ಬಾಳೆಕುಂದ್ರಿಯಲ್ಲಿ ಪಂತಮಹಾರಾಜರ ಮಠ ಮತ್ತು ಮಂದಿರವಿದ್ದು ವರ್ಷಕ್ಕೊಮ್ಮೆ ಜಾತ್ರೆ ನಡೆಯುವುದು. ಬೆಳಗಾಂವಿ-ಸಂಪಗಾಂವ ಮಾರ್ಗದಲ್ಲಿ ಬೆಳಗಾಂವಿಯ ಆಗ್ನೇಯಕ್ಕಿರುವ ಬಾಗೇವಾಡಿ ಹೋಬಳಿ ಕೇಂದ್ರ ಮತ್ತು ವ್ಯಾಪಾರ ಕೇಂದ್ರ. 

	ಬೆಳಗಾಂವಿ ನಗರ ಈ ವಿಭಾಗದ ಹಾಗೂ ಜಿಲ್ಲೆಯ ಆಡಳಿತ ಕೇಂದ್ರ. ಇದು ಕರ್ನಾಟಕದ ಹೆಬ್ಬಾಗಿಲಿನಂತಿದ್ದು, ಮಲೆನಾಡು ಹಾಗೂ ಬಯಲುಸೀಮೆ ಕೂಡುವಲ್ಲಿ ಇದೆ. ಬೆಂಗಳೂರು-ಮೀರಜ್ ರೈಲುಮಾರ್ಗ ಹಾಗೂ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಮೇಲಿದ್ದು ಧಾರವಾಡದ ವಾಯವ್ಯಕ್ಕೆ ಸುಮಾರು 77 ಕಿಮೀ ದೂರದಲ್ಲಿ ಇದೆ. ನಗರದ ಉತ್ತರಕ್ಕೆ ಸುಮಾರು 5 ಕಿಮೀ ದೂರದಲ್ಲಿ ಮಾರ್ಕಂಡೇಯ ನದಿಯೂ ದಕ್ಷಿಣಕ್ಕೆ ಸುಮಾರು 3 ಕಿಮೀ ದೂರದಲ್ಲಿ ಅದರ ಉಪನದಿಯಾದ ಬಿಲಾರಿಯೂ ಹರಿಯುತ್ತವೆ. ನಗರ ಸಮುದ್ರ ಮಟ್ಟದಿಂದ 640-688 ಮೀ ಎತ್ತರದಲ್ಲಿದೆ. ನಗರದ ಬಳಿ ಸಣ್ಣ ಸಣ್ಣ ಗುಡ್ಡಗಳೂ ಮಾವಿನ ತೋಪುಗಳೂ ಇವೆ. ಇಲ್ಲಿ ವಾಯುಗುಣ ಸಾಮಾನ್ಯವಾಗಿ ತಂಪಾಗಿರುತ್ತದೆ. ಬೆಳಗಾಂವಿ ನಗರ ನಾಗರಿಕ ಹಾಗೂ ದಂಡಿನ ಪ್ರದೇಶಗಳಿಂದ ಕೂಡಿದೆ. ಚಂಡಿನ ಪ್ರದೇಶ ಮರಾಠಾ ಪದಾತಿದಳದ ಕೇಂದ್ರ. ದಂಡಿನ ಪ್ರದೇಶವೂ ಸೇರಿ ಮಹಾನಗರದ ಜನಸಂಖ್ಯೆ 5,06,235 (2001). 

	ಪುರಾತನ ಬೆಳಗಾಂವಿ ಈಗಿನ ಬೆಳಗಾಂವಿಯ ಆಗ್ನೇಯ ದಿಕ್ಕಿನಲ್ಲಿತ್ತೆಂದು ತಿಳಿದು ಬರುತ್ತದೆ. ಇದರ ಕುರುಹಾಗಿ ಅಳಿದುಳಿದ ಕೋಟೆಗೋಡೆಯ ಭಾಗಗಳಿವೆ. ನಗರದ ಪೂರ್ವ ಭಾಗದಲ್ಲಿ ಈಗ ಕಂಡುಬರುವ ಕೋಟೆಗೋಡೆ ಜೈನ ಅರಸರು ಕಟ್ಟಿದ್ದು. ಈ ಕೋಟೆಯಲ್ಲಿಯ ಕಮಲ ಬಸದಿ ಹಾಗೂ ಗಣಪತಿ ಗುಡಿಗಳು ಐತಿಹಾಸಿಕ ಪ್ರಸಿದ್ಧಿ ಪಡೆದಿವೆ. 

	1851ರಲ್ಲಿ ಬೆಳಗಾಂವಿ ಪುರಸಭೆ ಸ್ಥಾಪಿತವಾಯಿತು. ನಗರದ ಮಧ್ಯಭಾಗದಲ್ಲಿ ಮಾರುಕಟ್ಟೆಯಿದೆ. ಇಲ್ಲಿ ಹಾಲಿನಿಂದ ಸಿದ್ಧಗೊಳಿಸಿದ ಕುಂದಾ ಎಂಬ ಸಿಹಿತಿಂಡಿ ಪ್ರಸಿದ್ಧ. ಟಿಳಕವಾಡಿ, ಶಹಾಪುರ, ಹೊಸೂರ, ವಡಗಾಂವ, ಮಾಧವಪುರ, ಮಳಾಮಾರುತಿ, ಶಿವಾಜಿನಗರ, ಅನಗೋಳ ಇವು ನಗರದ ಪ್ರಮುಖ ವಿಭಾಗಗಳು. ಬೆಂಗಳೂರು-ಮಿರಜ್ ಮೀಟರ್‍ಗೇಜ್ ರೈಲುಮಾರ್ಗ ಹಾಗೂ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಗಳು ನಗರಕ್ಕೆ ಉತ್ತಮ ಸಂಪರ್ಕ ಕಲ್ಪಿಸಿವೆ. ವಿಮಾನ ಸಂಪರ್ಕವೂ ಇದೆ. 

	ಬೆಳಗಾಂವಿಯಲ್ಲಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗದ ಸೀರೆಗಳು ತಯಾರಾಗುತ್ತವೆ. ಅಲ್ಲದೆ ಇಲ್ಲಿ ಅನೇಕ ಚಿಕ್ಕ ಕಾರ್ಖಾನೆಗಳಿವೆ. ಅಲ್ಯೂಮಿನಿಯಮ್ ಕಾರ್ಖಾನೆ ಇರುವುದು ನಗರದ ಉತ್ತರಕ್ಕೆ, ನೈಋತ್ಯದಲ್ಲಿ ಔದ್ಯಮಿಕ ವಿಭಾಗವಿದೆ. ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮಹಾತ್ಮ ಬಸವೇಶ್ವರರ ಪ್ರತಿಮೆಗಳು ನಗರದಲ್ಲಿ ಆಕರ್ಷಕ ತಾಣಗಳು. ನಗರದಲ್ಲಿ ವೈದ್ಯಕೀಯ, ಕಲೆ ಮತ್ತು ವಿಜ್ಞಾನ ಹಾಗೂ ವಾಣಿಜ್ಯ ಮತ್ತು ನ್ಯಾಯಶಾಸ್ತ್ರ ಕಾಲೇಜುಗಳೂ ಅನೇಕ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳು ಇವೆ. ನಗರಕ್ಕೆ ರಕ್ಷಿತ ಜಲಪೂರೈಕೆ, ವಿದ್ಯುತ್ ಮತ್ತು ಒಳಚರಂಡಿ ವ್ಯವಸ್ಥೆ ಹಾಗೂ ವೈದ್ಯಕೀಯ ಸೌಕರ್ಯಗಳಿವೆ. ನಗರದ ಪೂರ್ವಭಾಗದಲ್ಲಿ ಕೋಟೆಯಿದೆ. ಕೋಟೆಯ ಅಗಸೆಯೊಂದರಲ್ಲಿ ದುರ್ಗಿಗುಡಿ, ಖಿಲ್ಲೇದಾರ್ ಅಸದ್‍ಖಾನನ ಮಸೀದಿ ಇದೆ. ಇಲ್ಲಿಯ ಸೇಂಟ್ ಮೇರಿ ಚರ್ಚ್ ಒಂದು ಪ್ರಮುಖ ಕಟ್ಟಡ. 

	ಬೆಳಗಾಂವಿಗೆ ಸೇರಿದಂತಿರುವ ವಡಗಾಂವ್ ಮಾಧವಪುರದಲ್ಲಿ ಕ್ರಿಸ್ತಶಕೆಯ ಆರಂಭದ ಕಾಲಕ್ಕೆ ಸ್ಥೂಲವಾಗಿ ನಿರ್ದೇಶಿಸಬಹುದಾದ ಒಂದು ಪ್ರಾಚೀನ ಕಟ್ಟಡ ಪತ್ತೆಯಾಗಿದೆ. ಆಗಿನಿಂದಲೂ ಬೆಳಗಾಂವಿ ಬೆಳೆಯುತ್ತ ಬಂದಿರಬೇಕು. ಗೋವೆಯ ಕದಂಬರ ಕಾಲದ ಅವಶೇಷಗಳು ಬೆಳಗಾಂವಿಯಲ್ಲಿ ದೊರೆತಿವೆ. ಮಹಮ್ಮದ್ ಗವಾನನ ಕಾಲದಲ್ಲಿ ಬೆಳಗಾಂವಿ ಕೋಟೆ ಬಹಮನಿ ಅರಸರ ವಶದಲ್ಲಿತ್ತು. ಆಗ ಇಲ್ಲಿ ಆತನ ಪ್ರತಿನಿಧಿಯಾಗಿದ್ದ ಮುಸ್ತಫಾನ ಹೆಸರಿನಲ್ಲಿ ಇದನ್ನು ಮುಸ್ತಫಾಬಾದ್ ಎಂದು ಕರೆಯಲಾಗಿತ್ತೆಂದು ಹೇಳಲಾಗಿದೆ. ಬಿಜಾಪುರದ ಆದಿಲ್ ಶಾಹಿಗಳು ಇದನ್ನು ವಶಪಡಿಸಿಕೊಂಡು ಅಜೀಮ್ ನಗರ್ ಎಂದು ಕರೆದರು. 17ನೆಯ ಶತಮಾನದಲ್ಲಿ ಇದೊಂದು ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಅನಂತರ ಇದು ಹೈದರ್ ಮತ್ತು ಟಿಪ್ಪುಗಳ ವಶದಲ್ಲಿತ್ತು. ಬ್ರಿಟಿಷರು 1818ರಲ್ಲಿ ಇದನ್ನು ವಶಪಡಿಸಿಕೊಂಡರು.  					       
 (ಎಸ್.ಎನ್.ಎ.ಆರ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ